ಅಜ್ಞಾತ

ಅಜ್ಞಾತ
******
ಅಲೆದಲೆದು ತಲೆ ಕಡಿದು ಗೆದ್ದ ನೆಲವ
ಅಂಗೈಯ ಜಲದಲಿ ತೊರೆದು,
ಕಡಲ ಹಿಮ್ಮೆಟ್ಟಿಸಿ ಭಾರ್ಗವನಾದೆ.
ಅವನಿಟ್ಟ ಶಿವಧನುವ ಮುರಿಯಲು ಮತ್ತೆ ಕೋಮಲ ರಾಮನಾದೆ.
ರಾಮ ಭಾರ್ಗವರ ಕಾಳಗವೆಂದರೆ-
ನನಗೆ ನಾನೇ ಎದುರಾಳಿ;
ನನ್ನ ಮಿತಿ ಮೀರುವುದಷ್ಟೇ ನನ್ನ ಯುದ್ಧ.

ಮೇಣೆಯಲಿ ಹೊರಟಾಗ ಕಂಡಿತ್ತು ಜರೆ, ರೋಗ, ಮರಣ.
ಮಸಣ ಸೋಕಿದ ಗಾಳಿಯನೆ ಉಸಿರಾಡಿ
ಖಿಲಖಿಲನೆ ಅರಳಿತ್ತು ಬೃಂದಾವನ.
ಹೆಜ್ಜೆ ಹೆಜ್ಜೆಗು ಸಜ್ಜಾಗಿರುವ
ಚುಂಬಿಸಲು ತವಕಿಸುವ
ಹೂವುಗಳ ಸನಿಹ
ರಾಸಲೀಲೆಯ ರಾಗಿಣಿಯಲು ನಿರ್ಮೋಹ...

ಅಂತಃಪುರದ ಹೊರಗೆ
ಅಂತರಾತ್ಮನೆಡೆಗೆ
ನಡೆನಡೆಯುತ್ತ ಪಾದ, ನಡು, ಎದೆ, ಶಿರವೆಲ್ಲ ಕರಗಿ
ಆಲಯವು ಬಯಲಾಗಿ, ಬಯಲು ಆಲಯವಾಗಿ
ತಪಿಸಿ ಪರಿತಪಿಸಿ ಕಾದ ಹುಣ್ಣಿಮೆ ರಾತ್ರಿ
ಬೋಧಿವೃಕ್ಷದ ಬೇರಿನಲು ಬ್ಲೋಜಾಬ್ ತಹತಹ!

ಇದು ನನ್ನ ಬುದ್ಧ
ಕೃಷ್ಣಾವತಾರದ ಸಂದಿಗ್ಧ.

ಬುದ್ಧ, ಭಾರ್ಗವ, ರಾಮ, ಕೃಷ್ಣರ
ಕಲಸುಮೇಲೋಗರ...
ಒಂದೊಂದು ಕಂಗಳಲಿ ಒಂದೊಂದು ಅವತಾರ...
ಯಾವ ಕನ್ನಡಿಯಲ್ಲು ಇದುವರೆಗು
ನನ್ನ ಮುಖ ಕಂಡಿಲ್ಲ.

ಕಾರಣವಿಲ್ಲದೆ

ಕಾರಣವಿಲ್ಲದೆ...
************

ಕಾರಣವಿಲ್ಲದೆ ಬೇಸರವಾಗಿದೆ
ಕೊಡು ವಿಷಾದದ ಮತ್ತೊಂದನು,
ಯಾವ ದುಃಖವೂ ನನ್ನೊಳಗೆ ಚಿರಾಯುವಲ್ಲ;
ನನ್ನ ಪಾದದ ನೆರಳು ಕಾಣುವಂತೆ
ಹೆಜ್ಜೆಯೊಂದನು ಇರಿಸಬೇಕಿದೆ.

ಕಾರಣವಿಲ್ಲದೆ ಪ್ರೀತಿ ಮೂಡಿದೆ
ಸುತ್ತು ಮುತ್ತಿನ ಸರಪಳಿಯನು,
ಯಾವ ಮೋಹವೂ ನನ್ನೊಳಗೆ ಚಿರಾಯುವಲ್ಲ;
ನಿನ್ನ ಕತ್ತಲಿನ ಜ್ವಾಲೆ ತಣಿಯದಂತೆ
ಕಾಮೋತ್ತೀರ್ಣನಾಗಬೇಕಿದೆ.

ಕಾರಣವಿಲ್ಲದೆ ಸಾವು ಸೆಳೆದಿದೆ
ನೀಡು ನೀರವದ ನೆಲೆಯೊಂದನು,
ಯಾವ ಚಿತೆಯೂ ನನ್ನೊಳಗೆ ಚಿರಾಯುವಲ್ಲ;
ಸಾವಿನ ಸ್ಮರಣೆ ಮೊರೆವಂತೆ ಸದಾ
ಎಚ್ಚರದ ಸಿಹಿನಿದ್ದೆಯಲಿ ಬದುಕಬೇಕಿದೆ.

ಬುದ್ಧ ನಡೆದ ಮೇಲೆ

ಬುದ್ಧ ನಡೆದ ಮೇಲೆ
***************

ಬುದ್ಧ
ನಡೆದುಬಿಟ್ಟ!
ನನ್ನ ಗತಿಯೇನು?

ಹಿಂದಿರುಗಲೇ?
ಅರಮನೆಗೆ ಸುದ್ದಿ ಮುಟ್ಟಿಸಬೇಕು,
ಪ್ರಜೆಗಳಿಗಾಗಿ ಕಥೆ ಕಟ್ಟಬೇಕು,
ಮೊದಲು ಯಶೋಧರೆಯ ಬಳಿ ಹೋಗಬೇಕು.
ಆದರೆ, ಬಿಟ್ಟು ಹೋಗುವ ಹಂಬಲವೇಕೆ ಹುಟ್ಟಿತೋ ವಿವರಿಸಲಾರೆ.
ಸಾವಿಗಿಂತಲೂ ಘೋರವಾದದ್ದನ್ನು
ಪ್ರತೀದಿನ ನೋಡುತ್ತಲೇ ಇದ್ದೇನಲ್ಲ!

ಇಳಿದಿದ್ದಾನೆ
ಇನ್ನು ರಥ, ಮೇಣೆಗಳ ಹತ್ತಲಿಕ್ಕಿಲ್ಲ
ಪೀತಾಂಬರ-ಶಲ್ಯ, ಒಡವೆ, ಕಿರೀಟ, ಎಲ್ಲದರಿಂದ ಜಾರಿಕೊಳ್ಳಬಹುದು.
ಕಾಡೊಳಗೆ ಬರಿಗಾಲು,
ಊರೊಳಗೆ ಬರಿಗೈ,
ನನ್ನ ಪ್ರಭು ಉಳಿಯಲಾರ.
ಹಸಿವು ಅರಿಯದ ಅರಸ
ಹುಣ್ಣಿಮೆಯನರಸ ಹೊರಟಿದ್ದಾನೆ.
ಹಿಂಬಾಲಿಸಲೆ?
ಒಂದು ವೇಳೆ ಹಿಂಬಾಲಿಸಿದರೆ,
ಏನಾಗಬಹುದು ನಾನವನಿಗೆ?
ಅವನು ಗುರುವಾದ ಕಾಲಕ್ಕೆ
ನಾನು ಬಹುಶಃ ಶಿಷ್ಯನಾಗಬಹುದು.

ಗುರುವಾದಷ್ಟು ಸುಲಭವಲ್ಲ ಶಿಷ್ಯನಾಗುವುದು
ಪರಮಹಂಸರಿಗು ಸಿಲ್ಕ್ ಶರ್ಟಿನ ಚಪಲ ಚಿಗುರಿತ್ತು
ಧರಿಸಿ ನೀಗಿಸಿಕೊಂಡ ಮರುಕ್ಷಣವೇ
ಒಡವೆ ಜವಳಿಗಳ ಮಳಿಗೆ ತೆರೆದಿದ್ದ ರಜನೀಶ.
ಬೆಂಕಿಗೆ ಬೆಂಕಿ ಸುರುವುತ್ತ ತನ್ಮಯನಾಗಿ
ನಂದಿಹೋಗುವ ತವಕದಲ್ಲಿ ಬೇಯುತ್ತಿರಬೇಕು ಶಿಷ್ಯ;
ಯಾವುದಾದರೊಂದು ಹುಣ್ಣಿಮೆ ರಾತ್ರಿ
ಬೋಧಿವೃಕ್ಷದ ನೆರಳು ಆಸೆಗಳ ಹೀರಬಹುದೆಂದು
ಕಾಯುತ್ತ ಕುಳಿತಿರಬೇಕು.

ಅವನೇನೋ ನಡೆದುಬಿಟ್ಟ
‘ಆಸೆಯೇ ದುಃಖಕ್ಕೆ ಮೂಲ’ ಎನ್ನುವುದ ಸಾರಲು
ಹುಟ್ಟಿದ್ದೇ ಬುದ್ಧನಾಗಿ ಎನ್ನುವವನ ಹಾಗೆ.


(೨೦೦೯ ಸಂಚಯ ಸ್ಪರ್ಧೆಯಲ್ಲಿ ಈ ಕವಿತೆ ಆಯ್ಕೆಯಾಗಿತ್ತು)

ಈ ಲೋಕದ ಸಲುವಾಗಿ

ಈ ಲೋಕದ ಸಲುವಾಗಿ
********************

ನನ್ನ ಅತೀವವೆಲ್ಲ ನಿನ್ನ ಕರಾಮತ್ತು
ನಿನ್ನೊಳೇನಿದೆ?!
ನಿನ್ನೊಳೇನಿದೆ ತಿಳಿಸು ನನ್ನದೆಂದು?
ನಮ್ನಮ್ಮ ನಡುವೆ ಏನೇ ಇರಲಿ
ಹೂವಾಡಗಿತ್ತಿ ಬೆರಳಂಚು ಒಣಗಬಾರದು,
ಮುಡಿಯಬಾರದೆ ತಂದಿತ್ತ ಮಲ್ಲಿಗೆಯನಿಂದು?

ಒಂದು ದಿನ ಕಂಡಂತೆ ಕಾಣಲಿಲ್ಲ ಮರುದಿನ-
ಆಕಾಶ-
ಆಕಾಶ ಮೈ-ಮನಸು ಸೆರೆಹಿಡಿಯಲಾರೆ.
ಸರಿ ನಿನ್ನ ಎತ್ತರಕೆ ಯಾವ ಬಂಗಾರ?
ಅಕ್ಕಸಾಲಿಗನ ಕುಲುಮೆ ನಂದಬಾರದು,
ಉರುಳೇನು ಕೊರಳಿಗೆ ತಾಳಿಯೊಂದು?

ನಾನೇ ನನ್ನವನಲ್ಲ, ನೀನೆಲ್ಲಿ ನನ್ನವಳು?
ಆಂತರ್ಯ ಅರಿಯೆ...
ಅರಿಯಲಾರೆನೆಂದೇ ಅಪರಿಮಿತ ಸೆಳೆತ.
ಅಂತರವೆ ಅನುರಾಗ ನಮಗೆ, ನಿಜ.
ಜಗದ ಸೃಜನತೆ ಸೊರಗಬಾರದು,
ಜಾರಿಸದೆ ಹೊರಲಾರೆಯಾ ಅಂಕುರವನೊಂದು?

ಕತ್ತಲಾಳುವ ಹೊತ್ತು

ನೇಗಿಲಿಳಿದಾಗ ನೋವೆನ್ನದೆ ನೆಲ
ಮೈತುಂಬ ತುಟಿ ಬಿರಿದು ನಗೆಸೂಸಿ,
ಒಳಬಿಟ್ಟಿತು ಹದಗೊಂಡಿತು
ತೆನೆಯ ನಗುವ ನೆನೆಸಿ.

ಗೆರೆ ಎಳೆದು ಎದೆಯೊಳಗೆ ಬೇರು
ರೂಪಿಸಿದ ನೂರು ರೂಹು
ಹೀರಿದ್ದು ಉಬ್ಬೊಡೆದು ಉತ್ಥಾನ.
ಒಮ್ಮೆ ಗುಡುಗಲು ಭುವಿಗೆ
ಎಷ್ಟೊಂದು ಕಾಣಿಸದ ಕಂಪನ!

ಹೊರೆಯಿಳಿದು ಹೊರತೆರೆದು ಹಸಿರು,
ಎಡಬಲದಲಿ ಬಹುಪರಾಕು ಬೀಸುವ
ಗಾಳಿ ಸೆಳೆದೆಡೆ ವಾಲುತ ನಿಂತಲ್ಲೆ ನಿಂತು,
ನಿತ್ಯನೂಕುವ ಸುಖದ ದರ್ಬಾರಿನಲಿ ಮುಳುಗಿರಲು
ಇದ್ದಕ್ಕಿದ್ದಂತೆ ಆಕ್ರಮಣ...,
ಸುತ್ತಲೂ ಕವಿದಿರುವ ಬೆಳಕನು
ಕತ್ತಲೊಂದು ಸೀಳಿ,
ಏಕತಾನದ ತಂತಿ ಮುರಿದು
ಏಕಮೇವಾದ್ವಿತೀಯ ಸಂಕ್ರಮಣ!

ಈ ಕತ್ತಲಾಯಣ ಪುಣ್ಯಕಾಲದಲಿ
ಗಾಳೀಮರ ಕಂಡಿತು ಕಿವಿಗೆ ಕಡಲಾಗಿ,
ತಂಗಾಳಿ ಸ್ಪರ್ಶದಲಿ ಕೊಳಲ ಕೊರಳು,
ಬೃಂದಾವನದ ಚಂದನವೇ
ಬೀಜಾಡಿ ಗದ್ದೆಯ ಬೂದಿಮಣ್ಣು,
ಕೆಂಪು ಹೂಗಳು ಹಬ್ಬಿ
ಎದೆಗೊರಗಿ ತಬ್ಬಿದ್ದ
ಕಳೆದಿರುಳು ತಂಪಿನಲಿ
ಝರಿಯೊಡನೆ ಮಲಗಿದ್ದ
ಕರಿಯ ಬಂಡೆಯ ಒಳಗೆ
ಕಲೆಯಲ್ಲವೋ.., ಕೃಷ್ಣನೇ ಅರಳಿದ್ದ!

ಸತ್ತ ಸರ್ಪ ಕೊರಳಿನ ಸುತ್ತ;
ಚಕ್ರವರ್ತಿಗೆ ಸಾವಿನ ವರ್ತಮಾನ;
ಯಾವ ಕತ್ತಲೊಳಗೆ ಮುಳುಗಿದ್ದ ಶಮೀಕ-
ಆ ಕತ್ತಲೊಳಗಿನ ಬೆಳಕು ಕಾಣಿಸಿತು
ಭಾಸ್ಕರನ ಕಿರಣಗಳು ಅಡಗಿಸಿದ
ವಸ್ತುವನು.
ಬೆಳಕಿನಂಧಕಾರ ಸರಿದು
ಕತ್ತಲಾಳುವ ಈ ಹೊತ್ತು, ಸತ್ತರೂ ಸಿಹಿ!!



*ಬೀಜಾಡಿ- ನಾನು ಹುಟ್ಟಿದ ಊರಿನ ಹೆಸರು.

ಹುಟ್ಟುಹಬ್ಬವೆಂದರೆ?

ಹುಟ್ಟುಹಬ್ಬ ಆಚರಿಸಿಕೊಳ್ಳಬೇಕೇ ಬೇಡವೇ? ಉತ್ತರ ಕೊಡುವುದು ಬಹಳ ಕಷ್ಟ. ಒಂದು ಕಡೆ, ತನ್ನ ಹುಟ್ಟುಹಬ್ಬವನ್ನು ವೈಭವದಿಂದ ಆಚರಿಸಿಕೊಳ್ಳುವವರು ಶತಮುಠ್ಠಾಳರು ಅಂದರೆ, ಮತ್ತೊಂದು ಕಡೆ, ಒಬ್ಬರ ಹುಟ್ಟುಹಬ್ಬದ ದಿನ ಅವರಿಗೆ ಹಾರೈಸಿ, make him feel important ಅಂತ ವಾದ. ನನ್ನ ತಂಗಿಯೊಬ್ಬಳು ಹೀಗೆ ಹೇಳಿದ್ದಳು - `Its the day you were born. So important for the people who love you. We were blessed' .

ನನ್ನ ಫಿಲೋಸಫಿ ಸಿಂಪಲ್. ಹುಟ್ಟುಹಬ್ಬದ ದಿನದಂದು ಸಾವಿಗೊಂದು ಕಣ್ಣುಹೊಡೆದು ಇನ್ನೊಂಚೂರು ಹೆಚ್ಚಿಗೆ ಪ್ರೀತಿಸುವುದಕ್ಕೆ ಸಾಧ್ಯವಾಗಬೇಕು. People around you are blessed by your birth. They will blessed again by your death. ಅದನ್ನೆಲ್ಲ ಮತ್ತೆ ಸುಧೀರ್ಘವಾಗಿ ಮಾತಾಡೋಣ. ಈಗ ಬರೆಯಬೇಕು ಅಂದುಕೊಂಡಿದ್ದು, ಪೆದ್ದು ಪೆದ್ದಾಗಿ ಅಮಾಯಕಳಂತೆ ಮಾತಾಡುವ ನನ್ನ ಗೆಳತಿ ಹೇಳಿದ ಮಾತು- `ಈ ದಿನ ನೀನು ಹುಟ್ಟಿದೆ. ಭಗವಂತ ನಿನ್ನನ್ನು ಬಹಳ ಪ್ರೀತಿಯಿಂದ ಭೂಮಿಗೆ ಕಳಿಸಿದ. ನೀನು ಅದನ್ನು ಸಂಭ್ರಮದಿಂದ ನೆನೆಯಬೇಕು. ಅವನಿಗೆ ನಿನ್ನನ್ನು ಯಾಕೇನೋ ಕಳಿಸಿದೆ ಅಂತ ವ್ಯಥೆಯಾಗಬಾರದು. ನಗುನಗುತ್ತ ಅವನಿಗೊಂದು ಥ್ಯಾಂಕ್ಸ್ ಹೇಳು'.

ನಿಮ್ಮ ಪ್ರಕಾರ ಹುಟ್ಟುಹಬ್ಬವೆಂದರೆ?

ಬೇಂದ್ರೆ ಗುಂಗಿನಲ್ಲಿ

ಇದು ನಾನು ಬರೆದ ಎರಡನೆಯ ಕತೆ. ಸುಮಾರು ಮೂರು ವರ್ಷದ ಹಿಂದೆ ಬರೆದದ್ದು. ಸಾಹಿತ್ಯಾಂಜಲಿ ಮತ್ತು ಉದಯವಾಣಿಯಲ್ಲಿ ಪ್ರಕಟವಾಗಿತ್ತು. ಕೆಲವು ದೋಷಗಳಿವೆ.

**********


’ನೀ ಹಿಂಗ ನೋಡಬ್ಯಾಡ ನನ್ನ
ನೀ ಹಿಂಗ ನೋಡಿದರ ನನ್ನ ತಿರುಗಿ ನಾ ಹ್ಯಾಂಗ ನೋಡಲೇ ನಿನ್ನ...’

ನೀವೆಲ್ಲರೂ ಕೇಳಿಯೇ ಇರುತ್ತೀರಿ. ನಾನೂ ಕೇಳಿದ್ದೇನೆ; ಸಾವಿರಾರು ಬಾರಿ. ಮೊದಲ ಬಾರಿಗೆ ಕೇಳಿದ್ದು ನನಗೆ ನಿಚ್ಛಲ ನೆನಪಿದೆ: ಬಹಳ ಹಿಂದೆ ದೂರದರ್ಶನದ ಚಿತ್ರಮಂಜರಿಯಲ್ಲಿ. ಮೊದಲ ಬಾರಿಗೇ ಹಿಡಿಸಿತು. ಅದಾಗಿ ಸುಮಾರು ದಿನಗಳ ಮೇಲೆ ರೇಡಿಯೋದಲ್ಲಿ ಕೇಳಿದೆ. ಮತ್ತೆ ಎಲ್ಲಿಯಾದರು ರೇಡಿಯೋ ಹಾಡುತ್ತಿದ್ದರೆ, ಚಿತ್ರಮಂಜರಿ ಬರುತ್ತಿದ್ದರೆ, ಈ ಹಾಡು ಬರುತ್ತದೋ ಅಂತ ಕಾಯುತಲಿದ್ದೆ. ಹೆಚ್ಚಾಗಿ ನಿರಾಶೆಯೇ ನನ್ನ ಪಾಲಿಗೆ. ಈಗ online music ಇರುವ websiteಗಳಲ್ಲಿ ಹಾಡಿನ ಹೆಸರು ಕೊಟ್ಟು search ಹೊಡೆದರೆ, ಆ ಹಾಡು feed ಆಗಿದ್ದರೆ ದೊರಕಿಬಿಡುತ್ತದೆ, ಮತ್ತೆ ಇಷ್ಟ ಬಂದಾಗೆಲ್ಲ; ಯಾವ ಹೊತ್ತಿನಲ್ಲಿ ಬೇಕಾದರೂ ಕೇಳಬಹುದು. repeat mode ಹಾಕಿ ದಿನವಿಡೀ ಕೇಳುತ್ತ ಕೂರಬಹುದು. ಆದರೆ ಆ ದಿನಗಳಲ್ಲಿ ಆ ಹಾಡಿಗಾಗಿ ಪರಿತಪಿಸುತ್ತಿರುವಾಗ ಯಾವುದಾದರು ಸಮಾರಂಭದಲ್ಲಿಯೊ, ಆರ್ಕೆಷ್ಟ್ರಾದಲ್ಲಿಯೋ (ಹತ್ತು-ಹದಿನೈದು ವರುಷದ ಹಿಂದಾಗಿದ್ದರೆ. ಈಗ ಅಂತಹ ಹಾಡುಗಳು ಬರುವ ಸಂಭವವೇ ಇಲ್ಲ), ಸ್ನೇಹಿತನ ಮನೆಯಲ್ಲೋ, ಊಟಕ್ಕೆ ಕೂತಾಗಲೊ, ಜಪ ಮಾಡುವಾಗಲೊ, ಇನ್ಯಾವಾಗಲೊ ಕಿವಿಗೆ ಬಿದ್ದಾಗ ಉಂಟಾಗುತ್ತಿದ್ದಂತಹ ಖುಷಿ ಈಗ ಮತ್ತೆ ಬರುತ್ತದೆಯೇ?. ಅದು ಕಳೆದು ಹೋಗಿದ್ದ; ಅಪ್ಪ ಕೊಡಿಸಿದ ಒಲವಿನ ಆಟಿಕೆಯೊಂದನ್ನ ಹುಡುಕುತ್ತಿರುವಾಗ, ಇದ್ದಕ್ಕಿದ್ದ ಹಾಗೆ ಯಾವುದೋ ಒಂದು ಮೂಲೆಯಲ್ಲಿ ದೊರೆತು ಕೈಗೆತ್ತಿಕೊಂಡು ಹಿಗ್ಗುವ ಮಕ್ಕಳ ಮನಸ್ಸಿನಲ್ಲಿ ಉಂಟಾಗುವಂತಹ ಉಲ್ಲಾಸ. ಬೇಕಾದಾಗ ಸಿಗುವ ವಸ್ತುವನ್ನು ಮನಸ್ಸು ಧೀರ್ಘವಾಗಿ ಹೊತ್ತುಕೊಂಡಿರುವುದಿಲ್ಲ. ಆ ವಸ್ತುವಿನ ಬಗೆಗಿನ ಭಾವ ತೀವ್ರತೆ ಕ್ರಮೇಣ ಕ್ಷೀಣಿಸುತ್ತದೆ. ಹಲವು ಬಾರಿ ಮರೆತುಬಿಡುವ ಸಂಭವವೂ ಇದೆ- ನಮಗೆ ಅದರ ಲೌಕಿಕ ಅವಶ್ಯಕತೆ ಇಲ್ಲದೇ ಇದ್ದರೆ.

ಈಗಲೂ ನೆಚ್ಚಿನ ಹಾಡು ಇದ್ದಕ್ಕಿದ್ದ ಹಾಗೆ ಕಿವಿಗೆ ಬಿದ್ದರೆ ನಾನು ಹುಚ್ಚೆದ್ದು ಹೋಗುತ್ತೇನೆ. ಆದರೆ ಅಲ್ಲಿ ನಿರೀಕ್ಷೆಯ ತಪವಿಲ್ಲ. ಸಿಗುವುದೋ ಇಲ್ಲವೋ ಎನ್ನುವ ಹತಾಶೆ ಹೊತ್ತು, ಎಂದಾದರು ಸಿಕ್ಕೇ ಸಿಗುತ್ತದೆ ಎನ್ನುವ ಆಶಾವಾದದೊಡನೆ ಸಂಚರಿಸುವ ಮನಸ್ಸಿಗೆ ವರವಾಗುವ ಗೀತೆಗಳು ಬಹಳ ಕಮ್ಮಿ. ಅಂತಹ ಹಾಡುಗಳ ನನ್ನ ಪಟ್ಟಿಯಲ್ಲಿ ಬೇಂದ್ರೆಯವರ ಈ ಹಾಡೂ ಸೇರಿದೆ. ’ಹುಣಿಮೆ ಚಂದಿರನ ಹೆಣ’ ಎನ್ನುವ ಮಾತೇ ಸಾಕು ಈ ಹಾಡು ನಿಮ್ಮನ್ನು ಕಾಡಲು.

ಕವಿತೆಯ ಯಾವ ಹಿನ್ನಲೆಯೂ ಕೊಡದೆ ಸುಮ್ಮನೆ ಹಾಡು ಕೇಳಿಸಿಬಿಟ್ಟರೆ: ಬೇಂದ್ರೆಯವರ ಅನೇಕ ಕವನಗಳು ನನ್ನಂತವನ ಪಾಲಿಗೆ ಕಬ್ಬಿಣದ ಕಡಲೆಯೇ. ಸ್ಥೂಲವಾಗಿ ಒಂದು ಚಿತ್ರಣ ದೊರಕುವುದೇ ಕಷ್ಟ ಇನ್ನು ಪದ ಬಳಕೆಯ ಉದ್ದೇಶ, ಪದ್ಯಗಳ ಪರಸ್ಪರ ಸಂಬಂಧ ಮಿಕ್ಕ ವಿಷಯಗಳೆಲ್ಲ ಅರ್ಥವಾಗುವ ಮಾತು ಬಹಳ ದೂರ. ಯಾವ ಹಿನ್ನಲೆ ಗೊತ್ತಿರದಿದ್ದರೂ, ರಂಗರಾಯರು ಕವಿತೆಗೆ ತಕ್ಕ ಸಂಗೀತ ಒದಗಿಸಿದನ್ನು ಕೇಳಿದಾಗ, ಈ ಹಾಡು ನಿಜಕ್ಕೂ ಚೆನ್ನಾಗಿದೆಯಲ್ಲವೇ? ಅಂತನಿಸುತ್ತದೆ. ಆದರೆ ನನಗೆ ಅದಲ್ಲ ಅನಿಸಿದ್ದು. ಸ್ನೇಹಿತನೊಬ್ಬ ತಿಳಿಸಿದ್ದ ’ಈ ಹಾಡನ್ನು ಬೇಂದ್ರೆಯವರು ತಮ್ಮ ಮಗು ಸತ್ತಾಗ, ಅಳದೆ ದುಗುಡವನ್ನೆಲ್ಲ ಒತ್ತಿಟ್ಟುಕೊಂಡು ತಮ್ಮನ್ನೇ ದಿಟ್ಟಿಸುತ್ತಿದ್ದ ಪತ್ನಿಯನ್ನು ಕುರಿತು ಹಾಡಿದರಂತೆ!’. ಈ ಹಿನ್ನೆಲೆ ನಿಮಗೂ ಗೊತ್ತಿರಬಹುದು. ಆ ತಾಯಿಯ ನೋಟ ಹೇಗಿದ್ದಿರಬಹುದು?. ಶಾಂತ ಪ್ರವಾಹವೇ? ಈಟಿ ಇರಿಯುವಂತಹುದೇ? ಇನ್ನೊಂದು ಕ್ಷಣ ನೋಡಿದರೆ ಸುಟ್ಟುಬಿಡುವಂತಹ ಜ್ವಾಲೆಯೇ? ಇವೆಲ್ಲಕ್ಕಿಂತಲೂ ತೀಕ್ಷ್ಣವಾದ ಶೂನ್ಯ ಭಾವವೇ?. ಹೌದು ಶೂನ್ಯ ಭಾವವೇ ಇರಬೇಕು. ಅದಕ್ಕೆ ’ಅತ್ತಾರೆ ಅತ್ತು ಬಿಡು ಹೊನಲು ಬರಲಿ ನಕ್ಕ್ಯಾಕೆ ಮರಸತೀ ದುಃಖ’ ಅಂತ ಹಾಡಿದ್ದು. ನಿರ್ಲಿಪ್ತ ನೋಟದೊಡನೆ ವ್ಯಾಕುಲದ ಕಿರುನಗೆಯೊಂದು ಸೇರಿ ಬಿಟ್ಟರೆ ಎದುರಿನವನ ಹೃದಯ ಕುಸಿದು ಬೀಳುತ್ತದೆ. ಅಂತಹ ನೋಟ ಎದುರಿಸುವಾಗ, ಅದಕ್ಕೂ ಮಿಗಿಲಾಗಿ ಮನೆಯಲ್ಲಿ ಮಗುವಿನ ಹೆಣ ಬಿದ್ದಿರುವಾಗ ಯಾವ ಮನುಷ್ಯನಿಗಾದರು ಹಾಡು ಕಟ್ಟುವ ಚೈತನ್ಯವಿರುತ್ತದೆಯೇ?. ಅದ್ಯಾರು ಕವಿಗಳು ಜಗತ್ತಿನ ಸೌಂದರ್ಯವನ್ನು ಹಾಡಿದವರು? ಕಲೆಯನ್ನು ಕೊಂಡಾಡಿದವರು? ಬದುಕನ್ನು ಪ್ರೀತಿಸಿದವರು? ಪ್ರಕೃತಿಯನ್ನು ಆರಾಧಿಸಿದವರು? ಶೋಷಿತರನ್ನು ಬಡಿದೆಬ್ಬಿಸಿದವರು? ಸಮಾಜವನ್ನು ತಿದ್ದಿ ಕಟ್ಟಿದವರು? ಮನುಷ್ಯ ಸಂಬಂಧಗಳ ಸೂಕ್ಷ್ಮವನ್ನು ಎಳೆ ಎಳೆಯಾಗಿ ಬಿಡಿಸಿಟ್ಟವರು? ಶೃಂಗಾರದ ರಸಪಾಕ ಉಣಿಸಿದವರು? ದೇವರನ್ನು ಹುಡುಕಹೊರಟವರು? ಅದ್ಯಾರು ಕವಿಗಳು?. ಕಂಡವರ ಹೆಣ ಕಂಡು ತತ್ವಜ್ಞಾನ ಮಾತನಾಡುವುದು ಸುಲಭ. ಯಾವ ಕವಿಗಾದರು ತನ್ನವರ, ಅಲ್ಲ, ತನ್ನ ಮಗುವಿನ ಚಿತೆ ಆರುವ ಮುನ್ನ ಕವಿತೆ ಹೊಳೆಯಲು ಸಾಧ್ಯವೇ? ಅಸಲು ಬೇಂದ್ರೆ ಕವಿಯೇ? ಅವರನ್ನು ಕವಿಯೆಂದು ಕರೆದು ಅವಮಾನಿಸದಿರಿ. ಬೇಂದ್ರೆ ಮಹಾನ್ ಚೇತನ!.

ನೀವು ಸುಖೀಪುರುಷರೇ? ಸದಾ ನಗುತ್ತಿರುವವರೆ; ಇರ ಬಯಸುವವರೆ? ಹಾಗಾದರೆ ಈ ಹಾಡು ಕೇಳಬೇಡಿ. ನಿಮಗೆ ಸುಖದ ಅರ್ಥ ತಿಳಿಯಬೇಕೆ? ಈ ಹಾಡು ಕೇಳಿ. ಈ ಹಾಡು ಮನಸ್ಸನ್ನು ಹಿಂಡಿಹಾಕುತ್ತದೆ. ಕೇಳಿದಾಗ ಕಣ್ಣಿನಿಂದ ಎರಡು ಹನಿ ಜಿನುಗದಿದ್ದರೆ, ನೀವು ಮನುಷ್ಯರೆಂಬ ನಂಬಿಕೆ ನಿಮಗೇ ಹೊರಟುಹೋಗುತ್ತದೆ. ಏನೂ ಬರೆಯದೆ ಇರುತ್ತಿದ್ದರೂ ಬೇಂದ್ರೆ ನನಗೆ ಇಷ್ಟವಾಗುತ್ತಿದ್ದರು.
* * *

ಪ್ರಶಾಂತ್ ಬೇಂದ್ರೆಯ ಬಗ್ಗೆ ಬರೆಯುತ್ತಿರುವಾಗಲೆ ಫೋನು ರಿಂಗಿಣಿಸಿದ್ದು ಕೇಳಿ ಹಾಲ್ಗೆ ಬಂದ. ಮೊಬೈಲ್ ಆಫ಼್ ಮಾಡುವುದು ಮರೆತಿದ್ದ. ಮೊಬೈಲು ಅಂಡು ಹಾರಿಸುತ್ತ ಸದ್ದು ಮಾಡುತ್ತಿತ್ತು. ಮನೆಯಲ್ಲಿ ಯಾರೂ ಇಲ್ಲದ್ದು ನೆನಪಾಗಿ ಮೊಬೈಲಿನ ಸದ್ದು ಸಹಿಸಲಾರದೆ ಕೈಗೆತ್ತಿಕೊಂಡ.

’ಹಲೋ’

’ಹಲೋ, ಪ್ರಶಾಂತ್?’

’ಹೌದು ನೀವ್ಯಾರು?’

’ನಾನು ಹಯವದನ ಮಾತಾಡ್ತಿರೋದು’

’ಹಾಂ...’

’ಬೆಳಗ್ಗೆ ನಿಮ್ಮಲ್ಲಿಗೆ ಬಂದಿದ್ದೆ. ನೀನು ಇರಲಿಲ್ಲ. ನಿನ್ನ ತಂದೆಯೊಟ್ಟಿಗೆ ಮಾತಾಡಿದೆ.’

’ಹಾಂ ಹೇಳಿದ್ರು. ಅದು, ನೀವೊಂದು ಕೆಲ್ಸ ಮಾಡಿ, ನನ್ನ e-mail idಗೆ ನಿಮ್ಮ ಮಗನಿಗೆ resume ಕಳಿಸೋಕೆ ಹೇಳಿ’

’ಆಯ್ತು. ಅವನು ಈವತ್ತು ಬೆಳಗ್ಗೆ ಕಳ್ಸಿದಾನೆ ಅನ್ಸುತ್ತೆ. ನೋಡು, ಸ್ವಲ್ಪ ಪ್ರಯತ್ನ ಪಡು. ಕಾಲೇಜು ಮುಗಿಸಿ ನಾಲ್ಕು ತಿಂಗಳಾಯ್ತು’

’ನೋಡ್ತೀನಿ. ನಿಮ್ಮ ಮಗನದ್ದು percentage ಎಷ್ಟಿದೆ?’

’61 percent. ಸ್ವಲ್ಪ ಕಮ್ಮಿಯಾಯ್ತು’ ಸಂಕೋಚದ ದನಿಯಿತ್ತು.

ಸ್ವಲ್ಪ ಏನು ಪೂರ್ತಿ ಕಮ್ಮಿಯಾಗಿದೆ ಎಂದುಕೊಂಡ. ಆದರೂ ಏನೂ ಹೇಳದೆ ’ಸರಿ ನೋಡೋಣ. ಈ ಸಲ ನಾನು interview ತಗೊಳ್ಳೋಕೆ ಹೋಗ್ತಿಲ್ಲ. ನಾನು ಪ್ರಯತ್ನ ಪಡಬಹುದು ಅಷ್ಟೆ’

’ಏನೋ ಮನಸ್ ಮಾಡಪ್ಪ. ಅವನಿಗೊಂದು ಕೆಲಸ ಅಂತ ಸಿಕ್ಕಿದ್ರೆ ನಮಗೆ ನೆಮ್ಮದಿ’ ನಿರಾಸೆಯಿಂದ ಹೇಳಿದರು.

’interview ಯಾವತ್ತು?’

’ನಾಡದ್ದು ಬುಧವಾರ’

’ಈವತ್ತು ಭಾನುವಾರ. ಸರಿ, ನಾಳೆ ನೋಡ್ತೀನಿ ಯಾರದ್ರು ಗೊತ್ತಿರೋರು ಇದ್ರೆ ಹೇಳ್ತೀನಿ. ನನ್ನನ್ನ ನಂಬ್ಕೊಂಡು ಕೂರಬೇಡಿ. interview ನಲ್ಲಿ ಚೆನ್ನಾಗಿ ಮಾಡೋಕೆ ಹೇಳಿ. ನನಗೆ ಬುಧವಾರ ರಾತ್ರಿ, interview ಮುಗಿದ ಮೇಲೆ ಫೋನ್ ಮಾಡಿ. ಎನಾಯ್ತು ಅಂತ ತಿಳಿಸ್ತೀನಿ. ಅಲ್ಲಿವರ್ಗೂ ಯಾರೂ ಗೊತ್ತಿಲ್ಲ ಅಂದ್ಕೊಂಡೇ prepare ಆಗೋಕೆ ಹೇಳಿ’

’ಆಯ್ತಪ್ಪ. ಇಡ್ತೀನಿ’

ಹಯವದನ ರಾಯರು ಬಹಳ ಹಿಂದಿನ ಪರಿಚಯ; ದೂರದ ಸಂಬಂಧ. ಬೆಳಗ್ಗೆ ಬಂದು ಸುಮಾರು ಹೊತ್ತು ಕೂತಿದ್ದು, ನಾನು ಬಾರದಿದ್ದು ಕಂಡು ಹೋಗಿದ್ದರೆಂದು ಅಪ್ಪ ಹೇಳಿದ್ದರು. ಮಗನ ಕೆಲಸದ ವಿಚಾರವಾಗೇ ಬಂದಿದ್ದರು. ಪ್ರತಿ ಭಾನುವಾರ ಬೆಳಗ್ಗೆ ಕ್ರಿಕೆಟ್ ಆಡೋಕೆ ಹೋಗೋದು ರೂಢಿ, ಇವತ್ತು ಬರೋದು ಸ್ವಲ್ಪ ತಡ ಆಗಿತ್ತು. ಅರವತ್ತು ಪರ್ಸೆಂಟ್ ತೆಗೆದವನಿಗೆ ಕೆಲಸ ಕೊಡಿ ಅಂತ ಹೇಗೆ ಕೇಳುವುದು?. ಇದೊಳ್ಳೆ ಫಜೀತಿ ಆಯ್ತು, ಒಂದು ಎಪ್ಪತ್ತು ಪರ್ಸೆಂಟ್ ಆದರು ಇದ್ದಿದ್ದರೆ. ಈ ಅಪ್ಪನಿಗೆ ಬೇರೆ ಬುದ್ಧಿಯಿಲ್ಲ. ನನ್ನ ಮಗಾನೂ interview ತಗೊಳ್ಳೋಕೆ ಹೋಗ್ತಾನೆ, ಅವನಿಗೆ ಹೇಳಿದ್ರೆ ಕೆಲ್ಸ ಸಿಕ್ಕಿದ ಹಾಗೇ ಅಂತ ಹೇಳಿಟ್ಟಿದ್ದಾರೆ ಎಂದುಕೊಳ್ಳುತ್ತ ಟಿ.ವಿ ಆನ್ ಮಾಡಿದ. ಅವಸರದ ಜಪದಲ್ಲಿ ತುಳಸೀಮಣಿಯನ್ನು ಸರಸರನೆ ಎಣಿಸುವಂತೆ ಚಾನೆಲ್ ಚೇಂಜ್ ಮಾಡಿದ. ಯಾವುದೂ ಹಿಡಿಸದೆ, ಟಿ.ವಿ ಆರಿಸಿ, ರೂಮಿಗೆ ಹೋಗಿ ಬೇಂದ್ರೆಯ ಕುರಿತು ಬರೆದಿದ್ದನ್ನು ಒಮ್ಮೆ ಓದಿಕೊಂಡು ಎನ್ನೆರಡು ಕವಿತೆಗಳ ಮರ್ಮ ಬರೆಯಲು ಕುಳಿತ. ಕೊಂಚ ಸಮಯದ ನಂತರ ಡೋರ್ ಬೆಲ್ ಸದ್ದಾದದ್ದು ಕೇಳಿ ಬಾಗಿಲು ತೆಗೆದ. ಮನೆಯವರೆಲ್ಲ ಯಾರದೋ ಮದುವೆಯ receptionನಿಂದ ಮರಳಿದ್ದರು.

’ಏನು ಜೋರಾಗಿತ್ತ reception?’ ಒಳಬರುತ್ತಲೇ ಕೇಳಿದ

’ಹೋ, ಸಿಕ್ಕಾಪಟ್ಟೆ ಜನ. ತುಂಬಾ ಚೆನ್ನಾಗಿತ್ತು, ನೀನೂ ಬರಬಹುದಾಗಿತ್ತು. ನಿಂದು ಊಟ ಆಯ್ತಾ?’ ಪ್ರಶಾಂತನ ತಾಯಿ ಕೇಳಿದರು.

’ಆಯ್ತು. ಸ್ವಲ್ಪ ಕೆಲ್ಸ ಇತ್ತಮ್ಮ, ಇಲ್ದಿದ್ರೆ ನಾನೂ ಬರ್ತಿದ್ದೆ’

’ಏನ್ ಮಹಾ ಕೆಲ್ಸಾನೊ ರಾಯರಿಗೆ?’ ಟಿ.ವಿ ಆನ್ ಮಾಡಿ ಪ್ರಶಾಂತನ ತಂದೆ ಕೇಳಿದರು ’ಆಮೇಲೆ, ಹಯವದನ ರಾಯರು ಫೋನ್ ಮಾಡಿದ್ರಾ?’

’ಹ್ಞುಂ ಮಾಡಿದ್ರು’ ಎನ್ನುತ್ತ ರೂಮಿನೊಳಗೆ ನಡೆದ.

’ಏನ್ ಹೇಳ್ದೆ?’

’ಏನ್ ಹೇಳೋದು? ಅರವತ್ತು ಪರ್ಸೆಂಟ್ ಇಟ್ಕೊಂಡು ಏನ್ ಮಾಡೋದು? ನಾನ್ ಹೇಗಿದ್ರು interivew panel ನಲ್ಲಿ ಇಲ್ಲ’

’ಹಾಗ್ ಹೇಳ್ಬೇಡ್ವೋ. ನಿಂಗೆ ಗೊತ್ತಿರೋರು ಯಾರದ್ರು ಇದಾರ ನೋಡು. ಹಯವದನ ರಾಯರ ಪರಿಸ್ಥಿತಿ ನಿಂಗೂ ಗೊತ್ತು’

’ಯಾರೂ ಇದ್ದಂಗಿಲ್ಲ. ನೋಡೋಣ’ ಎಂದು ಬರವಣಿಗೆಯಲ್ಲಿ ಮಗ್ನನಾದ.

ಎರಡು ದಿನದ ಹಿಂದಷ್ಟೆ ಆಫೀಸಿನ ಸಹೋದ್ಯೋಗಿಯೊಬ್ಬ interview panel ನಲ್ಲಿ ಇರೋದಾಗಿ ಹೇಳಿದ್ದು ಜ್ಞಾಪಕಕ್ಕೆ ಬಂತು. ಆದರೆ ಅವನನ್ನ ಏನಂತ ಕೇಳೋದು?. ನಿಮ್ಮವರು ಯಾರದರು ಇದ್ದಾರ? ಅಂತ ಅವನೇ ಕೇಳಿದ್ದ. ಯಾರೂ ಇಲ್ಲ ಅಂದಿದ್ದೆ. ಆಗಿನ್ನು ಹಯವದನ ರಾಯರು ಏನೂ ಕೇಳಿರಲಿಲ್ಲ. ನಾಳೆ ಹೇಳಿದರೂ ಆಗುತ್ತೆ. ಶಿಫಾರಸ್ಸು ಮಾಡುವುದು, ನಕಲಿ experience, ನಕಲಿ certificates ಮಾಡಿಸೋದು, ಇವೆಲ್ಲ ಇಲ್ಲಿ ಮಾಮೂಲು. ಹಾಗೆ ಮಾಡಿಬಂದವರು ನನ್ನ ಪರಿಚಿತರೇ ಅನೇಕರಿದ್ದಾರೆ. ಅಂತವರನ್ನ ಕಂಡರೆ ಹೇಸಿಗೆ. ಅಂತವರೆನ್ನಲ್ಲ ಮೊದಲು ಹುಡುಕಿ ಹುಡುಕಿ ಕೆಲಸದಿಂದ ತೆಗೆದುಹಾಕಬೇಕೆಂದು ನಾನೇ ಎಷ್ಟೋ ಬಾರಿ ಹೇಳಿದ್ದೇನೆ- ಸ್ನೇಹಿತರ ಮುಂದೆ. ಇಂತವರು; ತೀರಾ ಕಡಿಮೆ ಯೋಗ್ಯತೆಯವರು ನನಗೆ ಸಮನಾಗಿ ಅಥವಾ ಇನ್ನೂ ಹೆಚ್ಚು ಸಂಬಳ ಪಡೆಯುವುದನ್ನು ಹೇಗೆ ಸಹಿಸುವುದು? ಆದರೆ ಇದಕ್ಕೂ ಹಯವದನ ರಾಯರಿಗೂ ಏನು ಸಂಬಂಧ? ಅವರು ಯಾವುದೇ ಮೋಸ ಮಾಡುತ್ತಿಲ್ಲ. ಅಲ್ಲದೆ ಹುಡುಗ ಬುದ್ಧಿವಂತನಿರಬಹುದಲ್ಲ?. ಇವನಿಗೆ ಕೆಲಸ ಕೊಡಲು ಹೇಳಿದರೆ ತನಗೇನೂ ತೊಂದರೆಯಿಲ್ಲ, ನಾನೇನು ಸಣ್ಣವನಾಗುವುದಿಲ್ಲ, ಇವೆಲ್ಲ ‘ಕಾಮನ್’ ತಾನೆ. ಆದರೆ ಮನಸ್ಸು ಯಾಕೋ ಹಿಂಜರಿಯುತ್ತಿದೆ. ಇದು ಅಸೂಯೆಯೇ? ನಾನು ಬೇರೊಬ್ಬರಿಗಿಂತ ಹೆಚ್ಚು ಯೋಗ್ಯ ಆದರೂ ಅವರಿಗಿಂತ ಕಡಿಮೆ ಸಂಬಳ ಎನ್ನುವ ಹತಾಶೆಯೆ? ಇರಲಾರದು. ಎರಡು ತಿಂಗಳ ಹಿಂದೆ ನಮ್ಮ ಪೈಕಿಯ ಹುಡುಗನೊಬ್ಬನನ್ನು ನಾನೇ ಸೆಲೆಕ್ಟ್ ಮಾಡಿದ್ದೆ. ಅವನಿಗೆ 65 percent, ಹುಡುಗ ಬುದ್ಧಿವಂತನೂ ಇದ್ದ. ಅಥವಾ ಎಲ್ಲರೂ ಬಂದು ಕೆಲಸ ಕೊಡಿಸಲು ಕೇಳಿ ಕೇಳಿ ರೋಸಿಹೋಗಿದ್ದೇನೆಯೇ?. ಅಲೋಚನೆ ಮಾಡ ಮಾಡುತ್ತಲೆ ಮಬ್ಬು ಬಂದಂತಾಗಿ ನಿದ್ರೆಹೋದ.

* * *

ಬೆಳಗ್ಗೆ ಸ್ನಾನ ಮುಗಿಸಿ ಹೊರಬಂದಾಗ ಬೈಕು ಸರ್ವೀಸಿಗೆ ಕೊಟ್ಟದ್ದು ನೆನಪಾಗಿ, ಇಂದು ಬಸ್ಸು ಹಿಡಿಯಬೇಕು, ಎಂಟು ಗಂಟೆಗೆ ಅಂದುಕೊಂಡು ಆತುರಾತುರವಾಗಿ ರೆಡಿಯಾಗಿ ಬಸ್ ಸ್ಟಾಪಿಗೆ ಬಂದ. ಎರಡು ನಿಮಷದೊಳಗೆ ಬಸ್ಸು ಬಂದು, ಹತ್ತಿಕೊಂಡು ಮಧ್ಯದಲ್ಲೊಂದು ಕಿಟಕಿ ಪಕ್ಕದ ಸೀಟಿನಲ್ಲಿ ಕುಳಿತ.

’ಹಯವದನ ರಾಯರಿಗೆ ಸಬೂಬು ಹೇಳುವುದೂ ಕಷ್ಟವಲ್ಲ. ಗೊತ್ತಿರುವವರು ಯಾರೂ ಇಲ್ಲ ಅಂತ ಹೇಳಿಬಿಡಬಹುದು. ಹೇಗಿದ್ದರು interview ಗೆ ಕರೆದಿದ್ದಾರೆ. ಯೋಗ್ಯತೆಯಿದ್ದರೆ ಕೆಲಸ ಸಿಗುತ್ತೆ ಇಲ್ಲದಿದ್ದರೆ........ಇಲ್ಲದಿದ್ದರೆ, ಕೆಲಸ ಸಿಗದಿದ್ದರೆ?’

ಕಿಟಕಿಯಾಚೆ ಕುರುಡು ನೋಟ ನೋಡುತ್ತಿದ್ದವನು ಇತ್ತ ತಿರುಗಿದ ’ಲೇಖನ ಈವತ್ತೇ ಪೋಸ್ಟ್ ಮಾಡಬೇಕು. ಮಧ್ಯಾಹ್ನ ಬಿಡುವು ಮಾಡಿಕೊಂಡು ಹೋದರಾಯಿತು’ ಎಂದುಕೊಂಡು ಕಣ್ಮುಚ್ಚಿದ. ನಿದ್ದೆ ಬರುವ ಹಾಗಿರಲಿಲ್ಲ. ಕಣ್ಣ ಮುಂದೆ ಹಯವದನರಾಯರ ಚಿತ್ರವೇ ಬರುತ್ತಿತ್ತು. ಇಸ್ತ್ರಿ ಇರದ ಬಟ್ಟೆ, ಮೊಣಕೈವರೆಗೂ ತೋಳು ಮಡಿಚಿದ ಅಂಗಿ. ದಪ್ಪದ ಕನ್ನಡಕದ ಒಂದು ಕಡ್ಡಿ ಬೆಂಡಾಗಿದೆ. ತುಸು ಉಬ್ಬು ಹಲ್ಲು, ಹುಲ್ಲು ಮೀಸೆ. ಹೆಗಲಿಗೊಂದು ಚೀಲ. ಬಣ್ಣ ಮಾಸಿದ ಬೆಲ್ಟಿನ ಕೈಗಡಿಯಾರದ ಗಾಜು ಯಾವ ಶತಮಾನದ್ದೋ?. ಚಪ್ಪಲಿಗಳು ಹಪ್ಪಲದ ತೆಳುವಿಗೆ ಬಂದಿದೆ.

’ಸಣ್ಣದೊಂದು ಗೂಡಂಗಡಿಯಂತಹ ಅಂಗಡಿಯಲ್ಲಿ ಚಿಕ್ಕಿ, ಕೊಬ್ಬರಿ ಮಿಠಾಯಿ, ಚಾಕಲೇಟು, ಬಾಳೇಹಣ್ಣು, ಸಿಗರೇಟು, ಬಿಸ್ಕತ್ತಿನ ಪೊಟ್ಟಣ ಮಾರಿಕೊಂಡು, ಜೊತೆಗೆ L.I.C ಏಜೆಂಟಾಗಿ ದುಡಿಯುತ್ತಿದ್ದರು. ಮಿಕ್ಕ ಏಜೆಂಟೆರ ಹಾಗೆ ’ಲಾಭ ಕಮ್ಮಿ ಇದ್ರೂ This is one of the very old and best scheme. ಒಬ್ಬ ಮನುಷ್ಯನಿಗೆ ಬೇಕೇ ಬೇಕಾದ್ದು- ಒಂದು ಮದುವೆ, ಒಂದು L.I.C policy’ ಎನ್ನುವ ಬಣ್ಣಬಣ್ಣದ ಮಾತಾಡಿ, ಪಾಲಿಸಿ ಗಿಟ್ಟಿಸಿಕೊಳ್ಳುವ ಚಾಕಚಕ್ಯತೆ ಅವರಿಗಿಲ್ಲ. ’ಒಂದು ಸ್ವಲ್ಪನಾದ್ರೂ ಮಾಡಿಸಿ’ ಅಂತ ಸಂಕೋಚದಿಂದ ಹಲ್ಲುಗಿಂಜಿಕೊಂಡೇ ಕೇಳುತ್ತಿದ್ದರು. ಬಹಳ ಸಂಕೋಚದ ಸ್ವಭಾವ. ಕೊನೆಗೆ ಪೈಕಿಯವರೆ ಒಂದಿಷ್ಟು ಜನ ಸೇರಿಕೊಂಡು ಅವರಿಗಿಷ್ಟು ಪಾಲಿಸಿ ಕೊಡಿಸಿದರು. ಅಪ್ಪನಿಗೂ ಹಾಗಾಗಿಯೇ ಅವರಲ್ಲಿ ಹೆಚ್ಚು ಒಡನಾಟ. ಸಣ್ಣವನಿದ್ದಾಗ ಪಾಲಿಸಿಯ ಹಣ ಕೊಟ್ಟು ಬರಲು ಅಪ್ಪ ಖುದ್ದು ಅವರ ಅಂಗಡಿಗೆ ಹೋಗುತ್ತಿದ್ದಾಗ ನಾನೂ ಹೋಗುತ್ತಿದ್ದೆ. ಗಾಜಿನ ಬಾಟಲಿಯಲ್ಲಿ ಜೋಡಿಸಿಟ್ಟ ಬರ್ಫಿ-ಚಿಕ್ಕಿ-ಚಾಕಲೇಟು, ತೂಗುಬಿಟ್ಟಿದ್ದ ಪುಟ್ಟುಬಾಳೆ ಗೊನೆಯನ್ನು ನೋಡುತ್ತ ನಿಲ್ಲುತ್ತಿದ್ದೆ. ’ಅವರು ಒಂದೇ ಒಂದು ಚಾಕಲೇಟೂ ಕೊಡಲಿಲ್ಲ’ ಅಂತ ಮನೆಗೆ ಬಂದು ಅಮ್ಮನಿಗೆ ದೂರು ಒಪ್ಪಿಸುತ್ತಿದ್ದೆ. ಅವರಿಗೇನೋ ಕೊಡಲು ಮನಸ್ಸಾಗುತ್ತಿತ್ತು ಆದರೆ ಒಂದು ಕೊಟ್ಟರೆ ಅದರ ನಷ್ಟ ತೂಗಿಸಲು ಹತ್ತು ಮಾರಾಟವಾಗಬೇಕು.

ಇರುವ ಒಬ್ಬನೇ ಮಗನ ವಿದ್ಯಾಭ್ಯಾಸ ಕೂಡ ಅವರಿವರ ಸಹಾಯದಿಂದಲೇ ಮುಗಿಸಿದ್ದಾರೆ. ಮನೆಯಲ್ಲಿ ಮೊದಲಿನಿಂದಲೂ ಅವರ ಮೇಲೆ ಗೌರವ. ನನಗೂ ಇದ್ದೇ ಇದೆ. ನಾನೇನು ಬೆಳ್ಳಿಬಟ್ಟಲಿನಲ್ಲಿ ಉಂಡು ಬೆಳೆದವನೇ?’

ಎಂಟು ಘಂಟೆಯ ಸಮಯಕ್ಕೇ ಗಿಜಿಗುಟ್ಟುವ ಟ್ರಾಫಿಕ್ಕಿನ ಸದ್ದಿನಲ್ಲೂ ಪ್ರಶಾಂತನ ಮನಸ್ಸು ಹಯವದನರಾಯರ ಕುರಿತೇ ಯೋಚಿಸುತ್ತಿತ್ತು. ಆಫೀಸಿನಲ್ಲಿ ಇಂದು ತುರ್ತಾಗಿ ಮಾಡಬೇಕಾಗಿದ್ದ ಕೆಲಸದ ಕಡೆ ಗಮನಹರಿಸಿದ. ’ಆ ಬಡ್ಡೀಮಗ ಸುರೇಶನಿಗೆ ಒಪ್ಪಿಸಿದ ಕೆಲ್ಸಾನ ಅವನು ಅರ್ಧಕ್ಕೆ ಹಾಳುಗೆಡವಿ ಅದೀಗ ಇಮ್ಮಡಿಯಾಗಿ ನನ್ನ ತಲೆಯ ಮೇಲೆ ಕೂತಿದೆ. ಇಂತವರಿಗೆಲ್ಲ ಹೇಗೆ ಕೆಲ್ಸ ಕೊಡ್ತಾರೋ?’ ಎಂದುಕೊಂಡು ಒಳಗೇ ಉರಿದ. ಆಫೀಸಿನ ಅಂಗಳದೊಳಕ್ಕೆ ಬಸ್ಸು ನಿಲ್ಲುತ್ತಿದ್ದಂತೆ, ಇಳಿದು ಅಫೀಸಿನೊಳಕ್ಕೆ ನಡೆದ.

* * *

ಹಯವದನ ರಾಯರ ಮಗ resume ಕಳುಹಿಸಿದ್ದ- ನಿನ್ನೆ ಬೆಳಗ್ಗೆಯೇ. percent 60.8 ಅಂತ ಹಾಕಿತ್ತು. ’ಒಂದು ವೇಳೆ ನಾನು ಹೇಳಿ ಕೆಲಸ ಸಿಕ್ಕಿ ಇವನಿಗೆ ಕೆಲಸ ಮಾಡುವ ತಾಕತ್ತೇ ಇಲ್ಲದಿದ್ದರೆ? ಈಗಿರುವ ಎಷ್ಟೋ ಮಂದಿಯ ಹಾಗೆ’ ಅಂದುಕೊಂಡ.

’Hey dude!, news ನೋಡಿದ್ಯಾ?. ಅದ್ಯಾರೋ ಇಂಡಿಯನ್, ಅಮೇರಿಕದಲ್ಲಿ fake petition ಕೊಟ್ಟು visa, green card processing ನಲ್ಲಿ fraud ಮಾಡಿ 5 million dollars ಹೊಡ್ದಿದ್ದಾನಂತೆ’ ಹೆಗಲ ಮೇಲೆ ಕೈಯಿಟ್ಟು ಸುರೇಶ ಹೇಳಿದ.

’ಹೌದು ಮೊನ್ನೆ ತಾನೆ ನಾನು ಇನ್ನೊಂದು article ಓದಿದ್ದೆ. ಒಬ್ಬ ಅಮೇರಿಕನ್ ಬರೆದದ್ದು. telephonic interview ಮಾಡಿದಾಗ, ಯಾರದೋ ಹೆಸರಿನಲ್ಲಿ ಯಾರೋ ಮಾತಾಡುತ್ತಾರೆ. ಕರೆದು ಕೆಲ್ಸ ಕೊಟ್ರೆ ಅವನು ಬೇರೆ ಯಾರೋ ಆಗಿರ್ತಾನೆ. ನಯಾ ಪೈಸೆ ಕೆಲ್ಸ ಗೊತ್ತಿರೊಲ್ಲ ಅಂತ ಭಾರತೀಯರಿಗೆ ಹೇಳೋ ಹಾಗೆ ಬಯ್ದಿದ್ದ. ಅಂಥ fraud ಗಳನ್ನೆಲ್ಲ ನೇಣಿಗೆ ಹಾಕಬೇಕು. ಅವರು ಮಾಡೋ ಹಲ್ಕಾ ಕೆಲ್ಸಕ್ಕೆ ದೇಶದ ಮಾನನೂ ಹೋಗುತ್ತೆ. scoundrals’ ಎಂದು ಸಿಟ್ಟು ತೋರಿದ. ಆ ಮಾತುಗಳಲ್ಲಿ ಸುರೇಶನನ್ನು ಚುಚ್ಚುವ ಉದ್ದೇಶವೂ ಇತ್ತು. ಸುರೇಶನ ಮುಖದಲ್ಲೂ ಸ್ವಲ್ಪ ಅಸಮಾಧಾನದ ಗೆರೆಗಳು ಮೂಡಿದವು. ಆ ವಿಷಯದ ಬಗ್ಗೆ ಇನ್ನು ಮಾತು ಮುಂದುವರಿಸಲಿಲ್ಲ. ಮಾತು ಬದಲಿಸುವ ಸಲುವಾಗಿ

’ಯಾರದ್ದು resume?’ computer screen ನೋಡಿ ಕೇಳಿದ.

’ಒಬ್ಬ ಫ್ರೆಂಡ್ ನದ್ದು. ಯಾವಗ್ಲೋ ಕಳ್ಸಿದ್ದ. ಏನಪ್ಪ ಅಂತ ನೋಡ್ತಿದ್ದೆ’ ಅಂತ ಹೇಳಿ resume ಕ್ಲೋಸ್ ಮಾಡಿದ.

ಸುರೇಶ ತನ್ನ ಜಾಗಕ್ಕೆ ಹೋಗಿ ಕೂತ ಮೇಲೆ ’ಗೊತ್ತಿರೋರು ಯಾರೂ ಇಲ್ಲ ಅಂತ ನಾನೇ ಈವತು ಫೋನ್ ಮಾಡಿ ಹೇಳಿದರಾಯ್ತು. ಯಾಕ್ ಬೇಕು ಇಲ್ಲದ ಉಸಾಬರಿ. ಇನ್ಮುಂದೆ ಯಾರಿಗೂ ಕೆಲಸ ಕೊಡಿಸೋಕೆ ಹೋಗದಿದ್ರೆ ಆಯ್ತು ಆಗ ಇಂತ ಮುಜುಗರದ ಪರಿಸ್ಥಿತಿಗಳು ತಪ್ಪುತ್ತೆ’ ಎಂದುಕೊಂಡು ಕೆಲಸದಲ್ಲಿ ತೊಡಗಿದ.

* * *

ಮನೆಯಲ್ಲಿ ಸಂಜೆ ಕಾಫಿ ಹೀರುತ್ತಿರುವಾಗಲೇ ಗೊತ್ತಾದದ್ದು- ಲೇಖನ ಪೋಸ್ಟ್ ಮಾಡುವುದು ಮರೆತು ಹೋಗಿತ್ತು. ಕೂಡಲೇ ರೂಮಿಗೆ ಓಡಿ ಆಫೀಸಿನ ಬ್ಯಾಗಿನೊಳಗಿಂದ ಕವರ್ ತೆಗೆದ. ಹಾಳೆಗಳನ್ನು ಹೊರತೆಗೆದು, ತಾನು ಬರೆದ ಪದಗಳನ್ನು ಒಮ್ಮೆ ತಾನೇ ಓದಿಕೊಂಡ. ಮತ್ತೆ ಮತ್ತೆ ಹಯವದನ ರಾಯರೇ ಕಣ್ಮುಂದೆ ಬರುತ್ತಿದ್ದರು.

’ಆ ಹುಡುಗನಿಗೆ ಕೆಲಸ ಸಿಗದೇ ಇದ್ದರೆ?’.......ಸಿಗಲಿಲ್ಲ ಅಂದ್ರೆ ಅವನಿಗೆ ಯೋಗ್ಯತೆಯಿಲ್ಲ ಅಂತ ಅಷ್ಟೆ’ ಎಂದು ಉತ್ತರಿಸಿಕೊಂಡ. ’ಎಷ್ಟು ಬುದ್ಧಿವಂತ ಹುಡುಗರಾದರೂ interview ನಲ್ಲಿ ಒತ್ತಡಕ್ಕೆ ಸಿಲುಕಿ ತಡವರಿಸುತ್ತಾರೆ; ಎಡವುತ್ತಾರೆ. ಹಾಗಾಗಿಹೋದರೆ?’ ಹೀಗೊಂದು ಪ್ರಶ್ನೆ ಮೂಡಿತು. ’ಇದು ಕೇವಲ ನನ್ನ ಮನಸ್ಸಿಗೆ ನಾನೇ ಕೊಡುತ್ತಿರುವ ಸಮಜಾಯಿಷಿಯೇ?’ ಎಂದುಕೊಳ್ಳುತ್ತ ಮತ್ತೆ ಬೇಂದ್ರೆಯ ಕಡೆ ನೋಡಿದ.

’ಬೇಂದ್ರೆಯನ್ನು ಇಷ್ಟಪಟ್ಟಷ್ಟು ಹಯವದನ ರಾಯರನ್ನು ಯಾಕೆ ಇಷ್ಟಪಡಲಾಗುತ್ತಿಲ್ಲ?’ ಧುಗ್ಗೆಂದು ಪ್ರಶ್ನೆಯೆದ್ದಿತು. ’ಇವರು ಬುದ್ಧಿವಂತರಲ್ಲದ್ದಕ್ಕಾಗಿಯೇ? ನಿಜಕ್ಕೂ ಬೇಂದ್ರೆ ಏನೂ ಬರೆಯದೆ ಇರುತ್ತಿದ್ದರೆ ನಾನು ಅವರನ್ನು ಇಷ್ಟಪಡುತ್ತಿದ್ದೆನೆ?. ಒಂದು ಹಾಡಿನ ನಿರೀಕ್ಷೆಗೆ ಸ್ಪಂದಿಸುವ ಮನಸ್ಸು, ಒಬ್ಬರ ಬದುಕಿನ ನಿರೀಕ್ಷೆಗೆ ಏಕೆ ಸ್ಪಂದಿಸುತ್ತಿಲ್ಲ?. ಒಂದು ಸಾವಿಗೆ ಮರುಗಿದಷ್ಟು ಬದುಕಿಗೇಕೆ ಮರುಗುತ್ತಿಲ್ಲ?!

ಗೂಡಂಗಡಿ, ಹೊಳಪಿಲ್ಲದ ಕನ್ನಡಕದ ಹಿಂದಿರುವ ಅಮಾಯಕ ಕಂಗಳು, ಬಾಳೆಗೊನೆ, ಮಿಠಾಯಿ ನೋಡಿ ಜೊಲ್ಲು ಸುರಿಸುವ ಹುಡುಗ, ಹಣತೆಯ ಕಂದು ಬೆಳಕಿನಲ್ಲಿ ತೊಯ್ದ ಕೋಣೆ, ಆ ತಾಯಿಯ ಶೂನ್ಯನೋಟ, ಬೇಂದ್ರೆ, ಹಯವದನರಾಯರು, ಹಾಡು, ಬದುಕು, ನಿರೀಕ್ಷೆ, ತಪಸ್ಸು, ಆಸೆ, ಹತಾಶೆ, ಸಾವು........ಒಂದರ ಮೇಲೊಂದು ಚಿತ್ರಗಳು ತೇಲಿಬರುತ್ತಿವೆ. ಹೋ!.........’

ಕಣ್ಣೆದುರು ಎದ್ದುನಿಂತಿರುವ ಬದುಕಿನಂತಹ ಗೋಡೆ, ನೆತ್ತಿಯ ಮೇಲೆ ಗೋಡೆಯ ಎತ್ತರವನ್ನು ಮಟ್ಟ ಹಾಕಿರುವ ಸಾವಿನಂತಹ ಮಾಡು, ಅವೆರಡು ಸಂಧಿಸುವ-ಬೇರ್ಪಡುವ ಆಸೆ-ನಿರಾಸೆಗಳ ಅಡ್ಡಗೆರೆಯ ಮೇಲೆ ನೆಟ್ಟಿದ್ದ ದೃಷ್ಠಿ ಕೆಳೆಗಿಳಿಯಿತು. ಕೈಲಿದ್ದ ಹಾಳೆಗಳನ್ನು ಮೇಜಿನ ಮೇಲೆಸೆದು ಎರಡೂ ಅಂಗೈಗಳು ಕಿವಿ ಉಜ್ಜಿಕೊಳ್ಳುತ್ತ ಗಲ್ಲದ ತುದಿಯಲ್ಲಿ ಸೇರಿದವು.

’ಬೇಂದ್ರೆ ಏನೂ ಬರೆಯದೆ ಇರುತ್ತಿದ್ದರೆ ಅವರನ್ನು ನಾವು ಗುರುತಿಸುತ್ತಿದ್ದೆವಾ? ಹೀಗೆ ಅವರ ಬಗ್ಗೆ ಮೆಚ್ಚಿ ಬರೆಯುತ್ತಿದ್ದೆನಾ? ಹಾಗಾದರೆ ಕೇವಲ ಬರೆದದ್ದಕ್ಕಾಗಿಯೇ ಅವರನ್ನು ಮೆಚ್ಚಬೇಕಾ? ಹಯವದನ ರಾಯರ ಬದುಕಿನಲ್ಲಿ ಯಾವ ದೋಷವಿದೆ?’ ಚದುರಿದ್ದ ಹಾಳೆಗಳನ್ನು ಕೈಗೆತ್ತಿಕೊಂಡು, ಕವಿತೆಗಳ ವ್ಯಾಖ್ಯಾನದ ಭಾಗಗಳನ್ನು ಬದಿಗಿರಿಸಿದ. ಬೇಂದ್ರೆಯ ಬಗ್ಗೆ ಬರೆದ ಭಾಗದಲ್ಲಿ, ಕೊನೆಯಲ್ಲಿ ಒಂದು ಸಾಲು ಸೇರಿಸಿದ: ನಾನು ಬೇಂದ್ರೆಯವರ ಯಾವ ಕವಿತೆಗಳನ್ನೂ ಅಧ್ಯಯನ ಮಾಡಿಲ್ಲ.

’ನಾಳೆ ಹಯವದನ ರಾಯರ ಮಗನ ವಿಚಾರ ಮಾತಾಡಬೇಕು’ ಎಂದು ನಿರ್ಧಾರ ಮಾಡಿ ರೂಮಿನಿಂದ ಹೊರಬಂದ.

’ನಿನಗಾಗಿ ಓಡೋಡಿ ಬಂದೆ ನಾನು, ಕಾಣದೆ ಹೀಗೇಕೆ ಮರೆಯಾಗಿ ಹೋದೆ, ಮರೆಯಾಗಿ ಹೋದೆ ನೀನು.....’ ಟಿ.ವಿ ಹಾಡುತ್ತಿತ್ತು. ಆ ಹಾಡು ಹೊಸ ಅರ್ಥಗಳನ್ನು ಹುಟ್ಟಿಹಾಕುತ್ತಿದ್ದವು.